ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಸಂದೇಶ

|| ಶ್ರೀ ಗುರುಭ್ಯೋ ನಮಃ
ಹರಿಃ ಓಂ ||
| ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇತ್ ದೇವಂ ಅಧೋಕ್ಷಜಂ |

ಇದು ವಾಮನ ಸ್ತೋತ್ರದಲ್ಲಿರುವಂತಹ ಒಂದು ವಾಕ್ಯ. ಇಲ್ಲಿ ಏನು ಹೇಳಿದ್ದಾರೆಂದರೆ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಭಗವಂತನಾದ ಅಧೋಕ್ಷಜನನ್ನು ನಾವು ಧ್ಯಾನ ಮಾಡಬೇಕು.
ಹೀಗೆ ಧ್ಯಾನ ಮಾಡುವುದರಿಂದ ಭಗವಂತನ ಬಗೆಗಿನ ಜ್ಞಾನ -ಅರಿವು ಹೆಚ್ಚಾಗುತ್ತದೆ, ಭಗವಂತನ ದರ್ಶನವೂ ಆಗುತ್ತದೆ. ಇದು ದೇವರ ಅನುಗ್ರಹಕ್ಕೆ ದಾರಿಯಾಗುತ್ತದೆ. ದೇವರ ಅನುಗ್ರಹದಿಂದ ನಾವು ಮುಂದೆ ನಡೆಸುವ ಕೆಲಸಗಳೆಲ್ಲವೂ ಚೆನ್ನಾಗಿ ಮಾಡಲಿಕ್ಕೆ ಆಗುತ್ತದೆ.
ಇದನ್ನು ಪ್ರತಿದಿನ ಅಭ್ಯಾಸ ಮಾಡಿದರೆ, ದೇವರ ವಿಶೇಷ ಸನ್ನಿಧಾನ ನಮ್ಮಲ್ಲಿ ಬರುತ್ತದೆ ಮತ್ತು ದೇವರ ಅಸ್ತಿತ್ವದ ನೆನಪು ಮತ್ತು ಅನುಭವ ನಮಗೆ ಸರಿಯಾಗಿ ಆಗುತ್ತದೆ.
ಹೀಗೆ ಭಗವಂತನ ಇರುವಿಕೆ ಪಕ್ವವಾದಾಗ, ದೃಢವಾದಾಗ ಮತ್ತು ಭಗವಂತನ ಅಸ್ತಿತ್ವವನ್ನು ಚೆನ್ನಾಗಿ ಅನುಭವಿಸುವುದರಿಂದ ನಮ್ಮ ಎಲ್ಲ ಕೆಲಸಗಳೂ ಚೆನ್ನಾಗಿ ನಡೆಯುತ್ತದೆ. ಈ ಭಾವನೆ ಮನಸ್ಸಿನಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಬೇಕು. ಈ ನಂಬಿಕೆ ಗಟ್ಟಿಯಾಗಿರಬೇಕು. ಆಗ ನಾವು ಹಿಡಿದ ಎಲ್ಲ ಕೆಲಸ ಕಾರ್ಯಗಳಲ್ಲೂ ಯಶಸ್ಸು ಕಾಣಲು ಸಾಧ್ಯ.
ಇದನ್ನು ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಜೀವನದ ಬ್ರಾಹ್ಮಿ ಮುಹೂರ್ತ ಎಂದರೆ ಅದು ನಾಲ್ಕನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನ ತನಕ. ಈ ಸಮಯದಲ್ಲಿ ಚೆನ್ನಾಗಿ ಅಧ್ಯಯನ ಮಾಡಬೇಕು. ಇದನ್ನು ಮನಗಂಡು ನಮ್ಮ ಮಕ್ಕಳಿಗೆ ಒಳ್ಳೆಯ ಚಿಂತನೆಗಳನ್ನು ಈ ವಯಸ್ಸಿನಲ್ಲಿ ನಾವು ಕೊಡಬೇಕು. ಆಗ ಆ ಎಲ್ಲ ಚಿಂತನೆಗಳು ಭದ್ರಬುನಾದಿಯಾಗಿ ಗಟ್ಟಿಯಾಗಿ ನೆಲೆಯೂರಿ ಅವರನ್ನು ಜೀವನದುದ್ದಕ್ಕೂ ರಕ್ಷಣೆ ಮಾಡುತ್ತದೆ ಎನ್ನುವುದು ಶ್ರೀಅದಮಾರು ಮಠದ ಪರಂಪರೆಯ ಆಶಯ.
ಆದ್ದರಿಂದ ಮಕ್ಕಳೆಲ್ಲರೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಚೆನ್ನಾಗಿ ಅಧ್ಯಯನ ಮಾಡಿ, ನಿಮ್ಮ ಜೀವನದ ಬ್ರಾಹ್ಮಿ ಸಮಯವನ್ನು ಚೆನ್ನಾಗಿ ಉಪಯೋಗ ಮಾಡಿಕೊಳ್ಳಿ.
ಭಗವಂತ ನಿಮಗೆಲ್ಲರಿಗೂ ಶ್ರೇಯಸ್ಸನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀಕೃಷ್ಣಾರ್ಪಣಮಸ್ತು.